(This post was written by Shashi Sampalli. With 19 years of experience in journalism Shashi Sampalli is indeed our star translator. Dad of a 8 year old girl, Literature, Environment, and Agriculture are his interests. In this piece, he speaks on how to balance “maturity and innocence” while writing for children.)
**********
ಅಚ್ಚರಿ ಹುಟ್ಟಿಸಿದ ಅದ್ಭುತ ಕ್ರಿಯೆಅನುವಾದ ಎಂಬುದು ಕೂಡ ಒಂದು ಸೃಜನಶೀಲ ಕ್ರಿಯೆ. ಅದರಲ್ಲೂ ಮಕ್ಕಳ ಸಾಹಿತ್ಯವನ್ನು ಅನುವಾದಿಸುವಾಗ ನಾವು ಸ್ವತಃ ನಮ್ಮೊಳಗಿನ ಮಗುವನ್ನು ಮುನ್ನೆಲೆಗೆ ತಂದುಕೊಂಡೆ ಅನುವಾದವನ್ನು ಆ ಮಗುವಿನ ಮೂಲಕವೇ ಆಗಿಸಬೇಕಾಗುತ್ತದೆ. ಎಲ್ಲ ಸೃಜನಶೀಲ ಸಾಹಿತ್ಕಕ್ಕೂ ಒಂದು ಹಂತದ ಮುಗ್ಧತೆ ಅಗತ್ಯ. ಮಕ್ಕಳ ಸಾಹಿತ್ಯದ ವಿಷಯದಲ್ಲಿ ಹೆಚ್ಚು ಮುಗ್ಧತೆ ಮತ್ತು ಕಡಿಮೆ ಪ್ರಬುದ್ಧತೆ ಉತ್ತಮ.
ಸ್ವತಃ ಮಕ್ಕಳ ಸಾಹಿತ್ಯ ರಚಿಸುವಾಗ ಪ್ರಬುದ್ಧತೆಯ ಪ್ರಮಾಣ ಕಡಿಮೆ ಇದ್ದರೂ ನಡೆಯುತ್ತದೆ ಅಥವಾ ಹೆಚ್ಚು ಅನುಕೂಲವಾಗಬಹುದು. ಆದರೆ, ಮಕ್ಕಳ ಸಾಹಿತ್ಯದ ಅನುವಾದ ಅಷ್ಟು ಸರಳವಲ್ಲ. ಅದಕ್ಕೆ ಪ್ರಬುದ್ಧತೆಯೂ ಬೇಕು. ಮುಗ್ಧತೆಯೂ ಬೇಕು. ಆ ಅರ್ಥದಲ್ಲಿ ಇದೊಂದು ತಂತಿ ಮೇಲಿನ ನಡಿಗೆ. ಎರಡೂ ಕಡೆಯ ಸಮತೋಲನ ಇಲ್ಲದೆ ಇದ್ದರೆ ಜಾರುವುದು ಖಂಡಿತ.
ಭಾಷೆ, ಅರಿವಿನ ವಿಷಯದಲ್ಲಿ ಅನ್ಯ ಭಾಷೆ ಮತ್ತು ಹೊಸ ವಿಷಯವನ್ನು ಅರ್ಥಮಾಡಿಕೊಂಡು ಅನುವಾದಿಸುವ ಪ್ರಬುದ್ಧತೆಯೂ ಬೇಕು. ಆ ಅನುವಾದ ಉದ್ದೇಶಿತ ವಯೋಮಾನದ ಮಕ್ಕಳಿಗೆ ಎಟುಕುವಂತೆ ಭಾಷೆ ಬಳಸುವ, ಮಕ್ಕಳ ಮನೋಸ್ಥಿತಿಗೆ ಅನುಗುಣವಾಗಿ ಸುಲಲಿತ ಮಾತುಗಳಲ್ಲಿ ತಲುಪಿಸುವ ಮುಗ್ಧತೆಯೂ ಬೇಕು.
ಈ ಸಮನ್ವಯತೆ ಸಾಧಿಸುವುದು ಸರಳವಲ್ಲ. ಅದಕ್ಕೆ ನಮ್ಮೊಳಗೆ ಒಬ್ಬ ತಿಳಿವು, ಅರಿವಿನ ವಯಸ್ಕನೂ ಇರಬೇಕು, ಜೊತೆಗೆ ಮುಗ್ಧತೆಯ ಮಗುವೂ ಇರಬೇಕು.
ಅನುವಾದಿಸುವ ಮುನ್ನ ನಮ್ಮ ಎದುರಿನ ಕಥೆ ಅಥವಾ ಸಾಹಿತ್ಯ ನಮ್ಮೊಳಗೆ ಇಳಿಯಬೇಕು. ಅನ್ಯ ಭಾಷೆಯ ಅದನ್ನು ಓದಿ, ಒಂದಿಷ್ಟು ಕಾಲ ಒಳಗಿಟ್ಟುಕೊಂಡು ನನ್ನ ಭಾಷೆಯ ಮಾತುಗಳಲ್ಲಿ ಮರು ಕಟ್ಟಬೇಕು. ಅದಕ್ಕಾಗಿ ಮಕ್ಕಳ ಮಾತುಗಳಿಗೆ ಕಿವಿಯಾಗಬೇಕು. ನಂತರ ಅನುವಾದಿಸುವಾಗ ಕೂಡ ಬಳಸುವ ಪ್ರತಿ ಪದವನ್ನೂ ಜೋರಾಗಿ ಉಚ್ಛರಿಸಿ, ಅದು ಮಗುವಿನ ಮಾತಿನಂತೆ ಕೇಳುತ್ತದೆಯೇ? ಪದ ಬಳಕೆ ಮಗುವಿನದ್ದೇ ಆಗಿದೆಯೇ ಎಂಬುದನ್ನು ನಿಖರಗೊಳಿಸಿಕೊಳ್ಳುತ್ತಲೇ ಮುಂದುವರಿಯಬೇಕು.
ನನಗಂತೂ ಒಬ್ಬ ಕವಿಯಾಗಿ ನನ್ನೊಳಗಿನ ಮಗುವಿನೊಂದಿಗೆ ಮಾತಾಡುವುದು ಈ ಕಾರ್ಯಕ್ಕೆ ಒದಗಿಬರುತ್ತದೆ. ಜೊತೆಗೆ ಎಂಟು ವರ್ಷದ ಮಗಳಿಗೂ ಕಥೆ ಓದಿ ಹೇಳಿ ಅವಳ ಪ್ರತಿಕ್ರಿಯೆ ಮೇಲೆ ತಿದ್ದುಪಡಿ ಮಾಡುವ ಅವಕಾಶ ಕೂಡ ಇದೆ.
ಹಾಗಾಗಿ, ಬಿಯಾಂಡ್ ಸೈಟಿಂಗ್ಸ್, ಬೆಸ್ಟ್ ಫೂಟ್ ಫಾರ್ವರ್ಡ್, .. ಚೀನಾಟೌನ್ ಮುಂತಾದ ಕಥೆಗಳು ನನ್ನ ನಿರೀಕ್ಷೆಗೂ ಮೀರಿ ಉತ್ತಮವಾಗಿ ಮೂಡಿಬಂದವು ಮತ್ತು ನನಗೇ ಅಚ್ಚರಿ ಹುಟ್ಟಿಸಿದವು.
ಮುಖ್ಯವಾಗಿ ಅನುವಾದ ಕ್ರಿಯೆಯನ್ನು ಆವು ಮೋಜಿನ ಆಟದಂತೆ ಆನಂದಿಸಬೇಕು.
ಇವು ನನ್ನದೇ ಅನುಭವದ ಮಾತುಗಳು.
- ಶಶಿ ಸಂಪಳ್ಳಿ