(This post was written by Girish N.R.. A techie turned movie buff’s interests vary from Theatre to Environment, Education to Tourism, writing etc. Loves the concept of Creative Commons. His views in this article gives a gist of renowned Kannada authors like Shivaram Karanth and Poornachandra Tejaswi’s attempts of writing for children.
**********
ತೇಜಸ್ವಿ ಮತ್ತು ಕಾರಂತರ ನೆಪದಲ್ಲಿ ...
ಬರಹ: ಗಿರೀಶ್ ಎನ್.ಆರ್.
ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಬಹಳಷ್ಟು ಪುಸ್ತಕದ ಆರಂಭದಲ್ಲಿ, ಲೋಹಿಯಾ ಅವರ ತತ್ತ್ವಚಿಂತನೆ, ಕುವೆಂಪು ಅವರ ಕಲಾ ಸೃಷ್ಟಿ ಮತ್ತು ಶಿವರಾಮ ಕಾರಂತರ ಜೀವನ ದೃಷ್ಟಿ- ಇವುಗಳ ಬಗ್ಗೆ ಉಲ್ಲೇಖಿಸುತ್ತಾರೆ. ಇಲ್ಲಿ ತತ್ತ್ವಚಿಂತನೆ, ಕಲಾ ಸೃಷ್ಟಿ ಮತ್ತು ಜೀವನ ದೃಷ್ಟಿ ಎಂಬ ಪದಗಳ ಆಯ್ಕೆಯೇ ಅದ್ಭುತವಾಗಿದೆ. ತೇಜಸ್ವಿ ಕೂಡ ಈ ಮೂರೂ ಅಂಶಗಳಲ್ಲಿ ಉನ್ನತಿ ಹೊಂದಲು ಪರಿ ಶ್ರಮಿಸದವರೇ. ಪ್ರಾಯಶಃ ಇದರ ಫಲವಾಗಿಯೇ ಕಾರಂತರು ಮತ್ತು ತೇಜಸ್ವಿ, ಮಕ್ಕಳ ಜ್ಞಾನದ ತೃಷೆಯನ್ನು ಹೆಚ್ಚಿಸಬಲ್ಲ ಆಸಕ್ತಿ ದಾಯಕ ವಿಷಯಗಳ ಹೊತ್ತ ಕನ್ನಡ ಪುಸ್ತಕಗಳನ್ನು ಹೊರತರುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಶಿವರಾಮ ಕಾರಂತರ "ಬಾಲ ಪ್ರಪಂಚ" ಮತ್ತು ತೇಜಸ್ವಿ ಅವರ "ಮಿಲೆನಿಯಮ್ ಸರಣಿಯ" ಪುಸ್ತಕಗಳನ್ನು ನೆಪವಾಗಿ ಇಟ್ಟುಕೊಂಡು ನಾನಿಲ್ಲಿ ಒಂದೆರೆಡು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ಪ್ರಯತ್ನ ಮಾಡಿದ್ದೇನೆ .
ಶಿವರಾಮ ಕಾರಂತರ "ಬಾಲ ಪ್ರಪಂಚ"ಮಕ್ಕಳ ವಿಶ್ವಕೋಶದಂತಹ (encyclopedia) ಬೃಹತ್ ಕೆಲಸವನ್ನು ಕನ್ನಡದಲ್ಲಿ ಕೈಗೆತ್ತಿಕೊಂಡ ಮೊದಲ ಪ್ರಯತ್ನ ಇರಬಹದು. (ಮತ್ತು ಕೊನೆ ಪ್ರಯತ್ನ ಕೂಡ ಇರಬಹುದು. ನಾನು ಇತಿಹಾಸಕಾರನಲ್ಲ). ಇಂತಹ ಕೆಲಸಕ್ಕೆ ಅವರಿಗಾದ ಆರ್ಥಿಕ ಮುಂಗಟ್ಟಿನ ಕಥೆ ವ್ಯಥೆಗಳು ನಮ್ಮ ಊಹೆಯನ್ನೂ ಮೀರಿದವು. ಆದರೂ ಅವರನ್ನ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತಿದ್ದುದೇನು? ಮಕ್ಕಳ ಮನಸ್ಸಿನ ಹಸಿವನ್ನು ಹೆಚ್ಚಿಸುವ ಮತ್ತು ಮನಸ್ಸನ್ನು ಅರಳಿಸುವ ಪುಸ್ತಕಗಳು ಕನ್ನಡದಲ್ಲೇ ಇರಬೇಕು ಎಂಬುದರ ಬಗ್ಗೆ ಅವರಿಗಿದ್ದ ಪ್ರೀತಿ . ದೇಶದ ಉದ್ದಗಲವೂ ಪ್ರಯಾಣಿಸಿದ್ದ ಅವರು ಮತ್ತು ದೇಶದ ಬಹುಸಂಖ್ಯಾತ ಮಕ್ಕಳ ಶಿಕ್ಷಣದ ರೀತಿ ನೀತಿಗಳನ್ನ ಅರಿತಿದ್ದ ಅವರು ಮಾತೃಭಾಷೆಯಲ್ಲಿ ವಿಶ್ವಕೋಶದಂತಹ ಪುಸ್ತಕ ತರವುದರ ಅವಶ್ಯಕತೆ ತಿಳಿದಿದ್ದರು. ಕೇವಲ ಮಾತೃ ಭಾಷೆಯಲ್ಲಿ ಬರೆಯುವುದಲ್ಲದೆ ಅದು ಮಕ್ಕಳಿಗೆ ಅನುಕೂಲವಾಗುವಂತೆ ಸರಳವಾಗಿ ಮತ್ತು ಸುಂದರವಾಗಿ ಇರುವಂತೆ ಕೂಡ ಅವರು ಜಾಗ್ರತೆವಹಿಸಿದ್ದಾರೆ. ವಿಶ್ವಕೋಶ ಎಂದಾದ ಮೇಲೆ ವಿಷಯಗಳಿಗೂ ಕೊರತೆಯಿಲ್ಲ . ಅಲ್ಲೂ ಕಾರಂತರು ತೋರಿರುವ ವೈವಿಧ್ಯತೆ ಮತ್ತು ಅಚ್ಚರಿಯ ವಿಷಯಗಳನ್ನು ಮಕ್ಕಳಿಗೆ ತಿಳಿಸಿ ಅವರನ್ನ ಉತ್ತೇಜಿಸ ಬೇಕು ಎಂಬ ಪ್ರಾಮಾಣಿಕತೆ ಮತ್ತು ಪ್ರೀತಿ "ಬಾಲ ಪ್ರಪಂಚ"ದಲ್ಲಿ ಎದ್ದು ಕಾಣುತ್ತದೆ.
"ಬಾಲ ಪ್ರಪಂಚ" ವಿಶ್ವಕೋಶ ಎಂಬ ಹಣೆಪಟ್ಟಿಯಲ್ಲಿ ಒಂದು ಮಟ್ಟಿಗೆ ಮಾಹಿತಿಯ ಪುಸ್ತಕವಾಗಿ ನಿಲ್ಲುತ್ತದೆ. ಕನ್ನಡದ ಮಟ್ಟಿಗೆ ಮೊದಲ ಪ್ರಯತ್ನವಾದ (ನಾನು ಇತಿಹಾಸಕಾರನಲ್ಲ) ಇದು ಪುಸ್ತಕದ ಹಿಂದಿನ ಉದ್ದೇಶವನ್ನು ಪೂರ್ಣಗೊಳಿಸುತ್ತದೆ ಕೂಡ.
ತೇಜಸ್ವಿ ಅವರ "ಮಿಲನಿಯಮ್ ಸರಣಿ" ಒಂದು ಮಟ್ಟಿಗೆ "ಬಾಲ ಪ್ರಪಂಚ"ದ ವಿಸ್ತರಣೆ ಎನ್ನಬಹುದು ಕೂಡ. ತೇಜಸ್ವಿ ಅವರು ಇದ್ದಿದ್ದರೆ ನನ್ನ ಈ ಮಾತು ನಿಜ ಎನ್ನುವಷ್ಟರ ಮಟ್ಟಿಗೆ "ಮಿಲನಿಯಮ್ ಸರಣಿ" ಬೃಹದಾಕಾರವಾಗಿ ಬೆಳೆಯುತ್ತಿತ್ತೇನೋ? ಅದೇನೇ ಇರಲಿ, "ಮಿಲನಿಯಮ್ ಸರಣಿ" ಹೊರ ಬರಲು ಕೂಡ ತೇಜಸ್ವಿ ಮತ್ತು ಕಾರಂತರಲ್ಲಿ ಇದ್ದ ತತ್ವಚಿಂತನೆ, ಕಲಾ ಸೃಷ್ಟಿ ಮತ್ತು ಜೀವನ ದೃಷ್ಟಿ ಸಾಮ್ಯತೆಯೇ ಕಾರಣ. ಮಕ್ಕಳಿಗೆ ಸಿಗುತ್ತಿರುವ ಜಡ ಶಿಕ್ಷಣದ ಕುರಿತು ತೇಜಸ್ವಿ ಅವರ ಅತೃಪ್ತಿ ಅವರ ಬರಹಗಳಲ್ಲಿ ಗಟ್ಟಿಯಾಗಿಯೇ ವ್ಯಕ್ತವಾಗಿದೆ. ಹಳ್ಳಿಯ ವಾತಾವರಣದಲ್ಲಿಯೇ ತಮ್ಮ ಬದುಕನ್ನು ರೂಪಿಸಿಕೊಂಡ ತೇಜಸ್ವಿ ಅವರು ಆಧುನಿಕತೆ , ಬದಲಾಗುತ್ತಿರುವ ಜ್ಞಾನವ್ಯವಸ್ಥೆ ಮತ್ತು ಶಿಕ್ಷಣದ ರೀತಿ ನೀತಿ, ಆಧುನಿಕ ಭಾರತದ ಆರ್ಥಿಕ ಮತ್ತು ಸಾಮಾಜಿಕ ವೈರುದ್ಧ್ಯ , ಇವ್ವೆಲವನ್ನ ಹತ್ತಿರದಿಂದ ವಿಶ್ಲೇಷಿಸಿದ್ದರು. ಈ ಹಿನ್ನೆಲೆಯಿಂದಲೇ ಅವರು "ಮಿಲನಿಯಮ್ ಸರಣಿ" ಕೆಲಸದಲ್ಲಿ ತೊಡಗಿಸಿಕೊಂಡರು. "ಮಿಲನಿಯಮ್ ಸರಣಿ" "ಬಾಲ ಪ್ರಪಂಚ"ದ ವಿಸ್ತರಣೆ ಎಂದು ನಾನು ಹೇಳುವಾಗ ವಿಷಯಗಳನ್ನು ಹೇಳುವಲ್ಲಿ "ಮಿಲನಿಯಮ್ ಸರಣಿ"ಯಲ್ಲಾದ ಉತ್ತಮ ಬೆಳವಣಿಗೆ ಕೂಡ ನನ್ನ ಮನಸ್ಸಿನಲ್ಲಿತ್ತು . ನನ್ನ ಪ್ರಕಾರ "ಮಿಲನಿಯಮ್ ಸರಣಿ" ವಿಷಯಗಳನ್ನು ಹೇಳುವ ತಂತ್ರಗಾರಿಕೆ ಮತ್ತು ಭಾಷೆ ಎರಡರಲ್ಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಈ ಉತ್ತಮ ಬೆಳವಣಿಗೆಗೆ ಕಾರಣವೇ ತೇಜಸ್ವಿ ಅವರಿಲ್ಲಿದ್ದ ತುಡಿತ ಮತ್ತು ಪ್ರೀತಿ.
ಈ ಎರಡೂ ಪುಸ್ತಕಗಳ ಪುಟಗಳನ್ನ ಮತ್ತೆ ತಿರುಗಿಸುವಂತೆ ಮಾಡಿದ್ದು ನನ್ನ ಇತ್ತೀಚಿನ ಅನುವಾದದ ಪ್ರಯತ್ನಗಳು. ನನ್ನ ಅನುವಾದದ ಸಮಯದಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡಿದ ಪ್ರಶ್ನೆಗಳ ಸಾಲೇ ಇಲ್ಲಿದೆ -- ನನ್ನ ಅನುವಾದ ಓದುವ ಮಕ್ಕಳ ಆಸಕ್ತಿಯನ್ನ ಕೆರಳಿಸುತ್ತದೆಯೇ? ಅದು ಅವರಿಗೆ ಮುದ ನೀಡುತ್ತದೆಯೇ? ನಾನು ಉಪಯೋಗಿಸುವ ಭಾಷೆ ಸರಳವೂ ಮತ್ತು ಸುಂದರವಾಗಿದೆಯೇ? ನಾನು ಹೇಳುತ್ತಿರುವ ವಿಷಯ ಅನುವಾದದಲ್ಲಿ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆಯೆ ? ನಾನು ತಲುಪಲು ಪ್ರಯತ್ನಿಸುತ್ತಿರುವ ವರ್ಗದ ವಸ್ತು ಸ್ಥಿತಿಯ ಅರಿವು ನನಗಿದೆಯೆ ? ನಾನು ಅನುವಾದ ಮಾಡಲು ಪ್ರಯತ್ನಿಸುತ್ತಿರುವ ವಿಷಯ/ಕತೆ ನನ್ನ ಭಾಷೆಯ ಅಥವಾ ಸಂಸ್ಕೃತಿಯ ಮಕ್ಕಳಿಗೆ ಹತ್ತಿರವಾಗಬಲ್ಲದೆ ?
ಅನುವಾದಕರು ತಮ್ಮ ಭಾಷೆಯಲ್ಲಿ ಒಂದು ವಿಷಯಕ್ಕೆ ಜೀವ ನೀಡುತ್ತಿರುತ್ತಾರೆ. ಅದು ಅನುವಾದ ಎನ್ನುವುದಕ್ಕಿಂತ ಹೆಚ್ಚಾಗಿ ಅದರ ಉದ್ದೇಶ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ . ನಾವು ಮಾಡುವ ಈ ಅನುವಾದಗಳು/ ಕತೆಗಳು/ವಿಷಯಗಳು ಮಕ್ಕಳ ಮನಸ್ಸನ್ನು ಅರಳಿಸ ಬೇಕೆಂದಿದ್ದಲ್ಲಿ ಕಾರಂತರು ಮತ್ತು ತೇಜಸ್ವಿ ಅವರಿಗಿದ್ದ ಆ ಪ್ರೀತಿ ಮತ್ತು ಕಾಳಜಿಯನ್ನ ರೂಢಿಸಿಕೊಳ್ಳಬೇಕಿದೆ. ಮೇಲಿನ ಎಲ್ಲ ಪ್ರಶ್ನೆಗಳಿಗೂ ಕೂಡಲೇ ಉತ್ತರ ಸಿಗದೇ ಹೋಗಬಹುದು. ಆದರೆ, ನಮ್ಮಲ್ಲಿನ ಆಶಯ ಮತ್ತು ಪ್ರೀತಿ ಹೇಗೋ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತದೆ.
Illustration courtesy : Shailja Jain Chougule